ಚಿಕ್ಕನಾಯಕನಹಳ್ಳಿ:ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಲು ಇಡೀ ತಾಲ್ಲೂಕು ಆಡಳಿತ ಈಗಿನಿಂದಲೇ ಸಜ್ಜಾಗಬೇಕು ಎಂದು ಸೂಚನೆ ನೀಡಿದರು.ಪಟ್ಟಣದ ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖಾ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬೇಸಿಗೆಯಲ್ಲಿ ಜಾತ್ರೆಗಳು ಹೆಚ್ಚಾಗಿ ನಡೆಯಲಿದ್ದು, ದಾಸೋಹ ಮತ್ತು ಪ್ರಸಾದ ವಿತರಣೆಯ ಸಂದರ್ಭದಲ್ಲಿ ಅಶುದ್ಧ ನೀರು ಅಥವಾ ಆಹಾರ ಸೇವನೆಯಿಂದ ಅನಾಹುತಗಳಾಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಸ್ಥಳೀಯ ಸಂಸ್ಥೆಗಳ ಅನುಮತಿ ಕಡ್ಡಾಯ. ಶಾಲೆ, ವಸತಿ ನಿಲಯಗಳು ಹಾಗೂ ಪಂಚಾಯಿತಿ ವ್ಯಾಪ್ತಿಯ ಶುದ್ಧ ನೀರಿನ ಘಟಕಗಳ ನೀರಿನ ಗುಣಮಟ್ಟದ ಇತ್ತೀಚಿನ ವರದಿಯನ್ನು ತಕ್ಷಣ ಸಲ್ಲಿಸಬೇಕು ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ಗ್ರಾಮ ಲೆಕ್ಕಿಗರಿಗೆ ಸೂಚಿಸಿದರು. ಜೊತೆಗೆ, ಮಹಿಳಾ ವಸತಿ ನಿಲಯಗಳ ವಾರ್ಡನ್‌ಗಳು ಕೇಂದ್ರ ಸ್ಥಾನದಲ್ಲೇ ವಾಸಿಸುವುದನ್ನು ಕಡ್ಡಾಯಗೊಳಿಸಿದರು.

ತಾಲ್ಲೂಕಿನ ಆಶ್ರೀಹಾಳ್, ಬಗ್ಗನಹಳ್ಳಿ ಮತ್ತು ಕೊಡಲಾಗರ ಭಾಗದಲ್ಲಿ ಚಿರತೆ ಓಡಾಟದಿಂದ ಜನರು ಆತಂಕಕ್ಕೀಡಾಗಿರುವ ಬಗ್ಗೆ ಅರಣ್ಯಾಧಿಕಾರಿ ಅಮಿತ್ ಅವರನ್ನು ತಹಶೀಲ್ದಾರ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಜನರ ಆತಂಕ ನಿವಾರಣೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು. ಸಾಕು ಪ್ರಾಣಿಗಳ ಅಸಹಜ ಸಾವು ಸಂಭವಿಸಿದರೆ ತಕ್ಷಣ ಪ್ರಾಥಮಿಕ ವರದಿ ಸಲ್ಲಿಸಬೇಕೆಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ ವೈ.ಜಿ. ಕಾಂತರಾಜು ಅವರಿಗೆ ನಿರ್ದೇಶನ ನೀಡಿದರು.ಹುಳಿಯಾರು ಭಾಗದಲ್ಲಿ ಕುರಿಗಳು ಮತ್ತು ಮಕ್ಕಳ ಮೇಲೆ ನಾಯಿಗಳ ದಾಳಿಯಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ತಹಶೀಲ್ದಾರ್, ಪಶುಗಳಿಗೆ ತಗಲುವ ರೋಗಗಳಿಗೆ ಸಾಕಾಣಿಕೆದಾರರು ಸ್ವಯಂ ವೈದ್ಯಕೀಯ ಚಿಕಿತ್ಸೆ ನೀಡಬಾರದು. ಇಲಾಖೆಯಲ್ಲಿ ಲಭ್ಯವಿರುವ ಉಚಿತ ಔಷಧೋಪಚಾರದ ಬಗ್ಗೆ ಪಶುಪಾಲಕರಿಗೆ ಸರಿಯಾದ ಮಾಹಿತಿ ನೀಡಿ. ಖಾಸಗಿ ಔಷಧ ಬಳಕೆಯಿಂದ ಪ್ರಾಣಿಹಾನಿಯಾಗದಂತೆ ಜಾಗೃತಿ ಮೂಡಿಸಿ ಎಂದು ತಾಕೀತು ಮಾಡಿದರು.ಪಟ್ಟಣದ ರಸ್ತೆ ಬದಿಯ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿ ನಡೆಸುತ್ತಿರುವ ಫಾಸ್ಟ್ ಫುಡ್ ಅಂಗಡಿಗಳಲ್ಲಿ ಸ್ವಚ್ಛತೆ ಇಲ್ಲದಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆಯ ನೆರವಿನೊಂದಿಗೆ ತೆರವು ಕಾರ್ಯಾಚರಣೆ ನಡೆಸಲು ಪುರಸಭಾ ಮುಖ್ಯಾಧಿಕಾರಿ ಮಂಜಮ್ಮ ಅವರಿಗೆ ಸೂಚಿಸಿದರು.ಸರ್ಕಾರಿ ಅಧಿಕಾರಿಗಳೂ ಸೇರಿದಂತೆ ಯಾರೇ ಸಂಚಾರಿ ನಿಯಮ ಉಲ್ಲಂಘಿಸಿದರೂ ದಂಡ ವಿಧಿಸುವಂತೆ ಪೊಲೀಸ್ ಇಲಾಖೆಗೆ ಮುಕ್ತ ಅಧಿಕಾರ ನೀಡಿದರು. ಶೀಘ್ರದಲ್ಲೇ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಆರೋಗ್ಯ ಸುರಕ್ಷತೆಯ ಬಗ್ಗೆ ಚರ್ಚಿಸುವುದಾಗಿ ಅವರು ತಿಳಿಸಿದರು.