ಮಾದಕ ವ್ಯಸನ ಯುವಕರ ಉಜ್ವಲ ಭವಿಷ್ಯದ ದಾರಿಗೆ ಮುಳ್ಳು, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ – ಡಿ ವೈ ಎಸ್ ಪಿ ಬಿ.ಕೆ.ಶೇಖರ್

Surya Pragathi Editor
2 Min Read

ಶಿರಾ : ಗ್ರಾಮದಲ್ಲಿ ಮಧ್ಯ ವ್ಯಸನಿಗಳಿದ್ದರೆ ವಿದ್ಯಾರ್ಥಿಗಳು, ಮಕ್ಕಳು ಅಂತವರಿಂದ ದೂರವಿರಿ, ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಆರಿಸುವಂತೆ ಅರಿವು ಮೂಡಿಸಬೇಕು, ಮಕ್ಕಳಿಂದ ಕೂಡ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದು ಡಿ ವೈ ಎಸ್ ಪಿ ಬಿ.ಕೆ.ಶೇಖರ್ ಹೇಳಿದರು.
ಶಿರಾ ತಾಲೂಕಿನ ಪಟ್ಟ ನಾಯಕನಹಳ್ಳಿ ಶಾಂತಿನಿಕೇತನ ವಿದ್ಯಾಸಂಸ್ಥೆಯ ನಾಡೋಜ ಪ್ರೊ ಬರಗೂರು ರಾಮಚಂದ್ರಪ್ಪ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ಶುಕ್ರವಾರ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಹಾಗೂ ನಶೆ ಮುಕ್ತ ತುಮಕೂರು ಅಭಿಯಾನ ಮತ್ತು ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಕಾಲೇಜು ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಿಸಬೇಕು, ಯಾವುದೇ ಕಾರಣಕ್ಕೂ
ಬಾಲ್ಯ ವಿವಾಹ ಮಾಡಬಾರದು. ಕಾನೂನು ಮತ್ತು ರಸ್ತೆ ಸುರಕ್ಷಿತ ಸಂಚಾರ ನಿಯಮ ಪಾಲಿಸುವುದು ನಮ್ಮ ಜವಾಬ್ದಾರಿಯಾಗಿದ್ದು, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ವಿಮೆ ಸೌಲಭ್ಯ ಇರುವ ದ್ವಿಚಕ್ರ ವಾಹನವನ್ನು ಮಾತ್ರ ಚಲಿಸುವಂತಾಗಬೇಕು. ಕಾನೂನನ್ನು ನಾವು ಗೌರವಿಸಿದರೆ, ಕಾನೂನು ನಮಗೆ ರಕ್ಷಣೆ ನೀಡುತ್ತದೆ ಸಾರ್ವಜನಿಕರು ಸಮವಸ್ತ್ರವನ್ನು ಧರಿಸದ ಪೊಲೀಸರೇ ಎಂಬುದನ್ನು ತಿಳಿಯಬೇಕು ಎಂದರು.
ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಪಿಎಸ್ಐ ಹರೀಶ್ ಮಾತನಾಡಿ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ತಡೆಯುವ ಪೊಲೀಸರ ಕರ್ತವ್ಯಕ್ಕೆ ಸಾರ್ವಜನಿಕರು ಕೂಡ ಸಹಕಾರ ನೀಡಬೇಕು. 14 ವರ್ಷದ ಮಕ್ಕಳು ಬಾಲಕಾರ್ಮಿಕರಾಗಲಿದ್ದು, ಇಂತಹ ಮಕ್ಕಳಿಗೆ ಕಡ್ಡಾಯವಾಗಿ ಶಾಲೆ ಬಿಟ್ಟು ಶಿಕ್ಷಣ ವಂಚಿತರನ್ನಾಗಿ ಮಾಡಿದಂತೆ ತಡೆಯಬೇಕು.
ಬಾಲ ಕಾರ್ಮಿಕರು ಕಂಡುಬಂದರೆ 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಿ. ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ಕಂಡು ಬಂದರೆ 112 ಪೊಲೀಸರಿಗೆ ಕರೆ ಮಾಡಿ, ಸಾರ್ವಜನಿಕರ ಸಹಕಾರದಿಂದ ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಿರ್ಮಾಣ ಮಾಡಲು ಸಾಧ್ಯ ಎಂದರು.
ಪಿಎಸ್ಐ ರೇಣುಕಾ ಯಾದವ್ ಮಾತನಾಡಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಪೋಸ್ಕೊ ಕಾಯ್ದೆ ಯಡಿ ಪ್ರಕರಣ ದಾಖಲಾಗಿದ್ದು, ಶಿಕ್ಷೆ ಕಡ್ಡಾಯವಾಗಲಿದೆ.
ಅಪರಾಧ ಮಾಡುವ ಮುಂಚೆ ನೂರು ಸಾರಿ ಆಲೋಚನೆ ಮಾಡುವುದು ಒಳ್ಳೆಯದು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪಿ. ಪಾಂಡುರಂಗಯ್ಯ ಮಾತನಾಡಿ ಸಮಾಜದ ನೆಮ್ಮದಿ ಬದುಕಿಗೆ ಕಾನೂನು ಮತ್ತು ಪೊಲೀಸ್ ವ್ಯವಸ್ಥೆಯೇ ಕಾರಣ ಎಂದರು.
ವೈದ್ಯಾಧಿಕಾರಿ ಡಾ. ತಿಮ್ಮರಾಜು ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಬಾಲ್ಯ ವಿವಾಹ ಹಾಗೂ ಮಾದಕ ವ್ಯಸನ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಉಪನ್ಯಾಸ ನೀಡಿದರು.
ಮಾದಕ ವಸ್ತು ಸೇವನೆ ಬಗ್ಗೆ ಪೊಲೀಸ್ ಇಲಾಖೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪಿಎಸ್ಐ ಸುಹೇಲ್ ಅಹಮದ್, ಶಾಂತಿನಿಕೇತನ ವಿದ್ಯಾ ಸಂಸ್ಥೆಯ ಪ್ರಾಂಶುಪಾಲೆ ಪಿ.ಆರ್.ಪ್ರತಿಭಾ ಸತೀಶ್, ರೇಣುಕಾ, ಪ್ರಜ್ವಲ್, ಪಿ.ಬಿ.ಕೀರ್ತಿ ಪ್ರಜ್ವಲ್, ಇಸಿಓ ಕರಿಯಣ್ಣ, ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

Share this Article
Leave a comment