ಸರ್ಕಾರಿ ಶಾಲೆಯನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಎಐಡಿಎಸ್ಓ ನೇತೃತ್ವದಲ್ಲಿ ಗ್ರಾಮಸ್ಥರ – ವಿದ್ಯಾರ್ಥಿಗಳ ಪ್ರತಿಭಟನೆ.

Surya Pragathi Editor
2 Min Read

ಬಿದರಕಟ್ಟೆ ಮತ್ತು ಬಸವೇಗೌಡನಪಾಳ್ಯದ

ತುಮಕೂರು ತಾಲೂಕಿನ ಬಿದರಕಟ್ಟೆ ಮತ್ತು ಬಸವೇಗೌಡನಪಾಳ್ಯದ ಸರ್ಕಾರಿ ಶಾಲೆಗಳನ್ನ ಮಸ್ಕಲ್ ಗ್ರಾಮ ಪಂಚಾಯಿತಿ ಶಾಲೆಗೆ ವಿಲೀನಗೊಳಿಸಲು ಹೊರಟಿರುವ ಸರ್ಕಾರದ ನಡೆಯನ್ನು ಖಂಡಿಸಿ, ನಮ್ಮೂರ ಶಾಲೆಯನ್ನು ನಾವು ಮುಚ್ಚಲು ಬಿಡುವುದಿಲ್ಲ ಎಂದು ಪ್ರತಿಭಟನೆಯ ಮೂಲಕ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಮಾತನಾಡಿ, ಬಡವರ ಮಕ್ಕಳು ಓದುವ ಗ್ರಾಮೀಣ ಭಾಗದ ಶಾಲೆಗಳಿಗೆ ಸೌಲಭ್ಯವನ್ನ ಒದಗಿಸಿ ಅಭಿವೃದ್ಧಿ ಪಡಿಸಬೇಕಾದ ಸರ್ಕಾರವೇ ಇಂದು ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುತ್ತಿದೆ. ಇದರಿಂದ ಹಣವಂತರಿಗೆ ಮಾತ್ರ ಶಿಕ್ಷಣ ಎಂಬ ಷಡ್ಯಂತ್ರವನ್ನು ಸರಕಾರ ರಚಿಸಿದಂತೆ ಎಂದರು. ಸರ್ಕಾರಿ ಶಾಲೆಗಳನ್ನು ಮುಚ್ಚಿ ಮ್ಯಾಗ್ನೆಟ್ ಶಾಲೆಗಳು ಅಸ್ತಿತ್ವಕ್ಕೆ ಬಂದರೆ ಬಡ ಮಕ್ಕಳಿಗೆ ಶಿಕ್ಷಣವೆಂಬುದು ಗಗನ ಕುಸಮವಾಗುತ್ತದೆ. ವಿಲೀನ ಯೋಜನೆ ಜಾರಿಗೊಳಿಸಿ, ಸರ್ಕಾರಿ ಶಾಲೆ ಮುಚ್ಚಿದರೆ ಸರ್ಕಾರದ ವಿರುದ್ಧ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದರು.

ನಾವು ಬೆಳಗ್ಗೆ ಯಿಂದ ಸಂಜೆವರೆಗೆ ದುಡಿಯುವ ಜನ, ನಮ್ಮ ಚಿಕ್ಕಮಕ್ಕಳನ್ನು 2 ಕಿಲೊಮೀಟರ್ ದೂರ ಇರುವ ಮಸ್ಕಲ್ ಶಾಲೆಗೆ ಕಳುಹಿಸಲು ಖಂಡಿತಾ ಸಾಧ್ಯವಿಲ್ಲ. ಅಲ್ಲದೆ ಹೆಣ್ಣು ಮಕ್ಕಳನ್ನು ದೂರದ ಊರಿಗೆ ಕಳುಹಿಸುವುದು ಕಷ್ಟ , ಈ ಯೋಜನೆ ಖಂಡಿತವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕುತ್ತು ತರುತ್ತದೆ ಎಂದು ಗ್ರಾಮಸ್ಥರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ 72ನೇ ಎಐಡಿಎಸ್ಓ ಸಂಸ್ಥಾಪನ ದಿನವನ್ನು ಆಚರಿಸಲಾಯಿತು. ಇತ್ತೀಚಿಗೆ ರಾಜ್ಯದಲ್ಲಿ ನಡೆದ ಮರ್ಯಾದೆ ಹೀನ ಹತ್ಯೆಯು ಇಡೀ ನಾಗರೀಕ ಸಮಾಜ ತಲೆತಗ್ಗಿಸುವಂತಿದೆ. ನಮ್ಮನ್ನಾಳುವ ಸರ್ಕಾರಗಳು ಜನಗಳ ಹಳೆಯ ಮಾನಸಿಕತೆಯನ್ನು ತೆಗೆಯಲು ಯಾವ ಪ್ರಯತ್ನಗಳನ್ನೂ ಮಾಡದೇ, ಬದಲಿಗೆ ಜಾತಿ ವ್ಯವಸ್ಥೆಯನ್ನು ಜೀವಂತವಾಗಿಡುವಲ್ಲಿ ವ್ಯಸ್ತರಾಗಿದ್ದಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ಜನರಲ್ಲಿ ಜಾತಿ – ಧರ್ಮಗಳ ವಿಷ ಬೀಜ ಬಿತ್ತಿ, ಮಾನವೀಯ ಮೌಲ್ಯಗಳ ಮಾರಣಹೋಮ ನಡೆಸಿದ್ದಾರೆ. ಹೀಗಿರುವಾಗ ಬಹಳ ಮಹತ್ತರ ಪಾತ್ರವನ್ನು ವಹಿಸುವ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ಕೊಡಬೇಕಾಗಿರುವುದು ಸರ್ಕಾರಗಳ ಆದ್ಯ ಕರ್ತವ್ಯವಾಗಬೇಕಿದೆ. ಈ ಐತಿಹಾಸಿಕ ಜವಾಬ್ದಾರಿಯನ್ನು ಅರಿತು ಸಾರ್ವಜನಿಕ ಶಿಕ್ಷಣ ಉಳಿಸಲು ರಾಜ್ಯದ ಎಲ್ಲಾ ಶಿಕ್ಷಣ ಪ್ರೇಮಿ ಜನತೆ ಸಂಕಲ್ಪ ತೊಡೋಣ. ಈ ಹಿನ್ನಲೆಯಲ್ಲಿ ಇಡೀ ರಾಜ್ಯದ ವಿದ್ಯಾರ್ಥಿಗಳು ಹಾಗೂ ಪೋಷಕರು ಸಾರ್ವಜನಿಕ ಶಿಕ್ಷಣವನ್ನು ಉಳಿಸಲು ಮುಂಬರಬೇಕು ಎಂದು ಕರೆ ನೀಡಿದರು.

Share this Article
Leave a comment