ಹೊಸ ವರ್ಷ ಸಂಭ್ರಮಾಚರಣೆಯ ಭದ್ರತೆಗೆ 20 ಸಾವಿರ ಪೊಲೀಸರ ನಿಯೋಜನೆ

ಬೆಂಗಳೂರು, :-* ನಗರದ ವಿವಿಧೆಡೆ ನಡೆಯುವ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಗರದಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು, ಬಂದೋಬಸ್ತ್ ವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಗರದಲ್ಲಿ ಹೊಸ ಸಂಭ್ರಮಾಚರಣೆಯ ಕರ್ತವ್ಯಕ್ಕೆ ಒಟ್ಟು 20 ಸಾವಿರ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆ 14 ಸಾವಿರ ಪೊಲೀಸರು, 2500 ಟ್ರಾಫಿಕ್ ಪೊಲೀಸರು, 88 ಕೆಎಸ್ಆರ್ಪಿ ಪ್ಲಟೂನ್ಸ್, 21 ಸಿಎಆರ್, 266 ಹೋಯ್ಸಳ ವಾಹನ, 250 ಕೋಬ್ರ ವಾಹನಗಳನ್ನು ನಿಯೋಜಿಸಲಾಗುತ್ತಿದೆ. 400 ಟ್ರಾಫಿಕ್ ವಾರ್ಡನ್ಗಳನ್ನು ನಿಯೋಜಿಸಲಾಗಿದೆ. ಜನ ದಟ್ಟಣೆ ನಿಯಂತ್ರಿಸಲು ವಾಟರ್ ಜೆಟ್ಸ್ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದು. ಸಿವಿಲ್ ಡಿಫೆನ್ಸ್, ಹೋಮ್ ಗಾರ್ಡ್ಸ್ ಸೇರಿದಂತೆ ಒಟ್ಟು 20 ಸಾವಿರ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ವಿವರಿಸಿದರು.
ಹೊಸ ವರ್ಷದ ಆಚರಣೆಯಲ್ಲಿ ಹೆಚ್ಚಿನ ಜನ ಭಾಗವಹಿಸುತ್ತಿದ್ದಾರೆ. ಕಳೆದ ವರ್ಷ 8 ಲಕ್ಷಕ್ಕು ಹೆಚ್ಚು ಜನರು ಸಂಭ್ರಮಾಚರಣೆಗಳಲ್ಲಿ ಭಾಗವಹಿಸಿದ್ದರು. ಎಂ.ಜಿ.ರಸ್ತೆ, ಬ್ರಿಗೇಡ್ ರೋಡ್, ಇಂದಿರಾನಗರ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯನ್ನು ಹೆಚ್ಚು ಜನ ಸೇರುವ ಸ್ಥಳಗಳೆಂದು ಗುರುತಿಸಲಾಗಿದೆ.

ಹಿಂದಿನ ವರ್ಷದ ಅನುಭವದ ಮೇಲೆ ಈ ಸ್ಥಳಗಳನ್ನು ಗುರುತಿಸಲಾಗಿದೆ. ಹಿಂದಿನ ವರ್ಷಕ್ಕಿಂತ ಹೆಚ್ಚು ಜನ ಸೇರಬಹುದು ಎಂದು ಅಂದಾಜಿಸಲಾಗಿದ್ದು, ಸುಮಾರು 10 ಲಕ್ಷಕ್ಕು ಹೆಚ್ಚು ಜನ ಸೇರುವ ಸಾಧ್ಯತೆ ಇದೆ ಎಂದರು.
ಜನರು ಸುರಕ್ಷಿತವಾಗಿ ಮನೆಗಳಿಗೆ ಹೋಗಲು ಅನುವು ಮಾಡಿಕೊಡಲಾಗುವುದು. ಬಾರ್ ಆ್ಯಂಡ್ ರೆಸ್ಟೋರೆಂಟ್, ಮೆಟ್ರೋ ಕಾರಿಡಾರ್, ಮನಸಂರಜನಾ ಸ್ಥಳಗಳಲ್ಲಿ ಹೆಚ್ಚಿನ ರೀತಿಯಲ್ಲಿ ಯುವಕ-ಯುವತಿಯರು ಸೇರುತ್ತಾರೆ. ಇದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅವಶ್ಯಕತೆ ಇರುವ ಸ್ಥಳಗಳಲ್ಲಿ ವಾಚ್ ಟವರ್, 180 ಕಡೆ ಫೋಕಸ್ ಲೈಟ್ಗಳನ್ನು ಅಳವಡಿಸಲಾಗುವುದು. ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲು ಪೊಲೀಸ್ ಆ್ಯಕ್ಸಿಸ್ ಕಂಟ್ರೋಲ್, ವಾಹನ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ಟ್ಯಾಕ್ಸಿಗಳು ಸಿಗುವುದಿಲ್ಲ. ಅಂತವರು ಸುರಕ್ಷಿತವಾಗಿ ಮನೆಗಳಿಗೆ ಹೋಗಲು 8 ಕಡೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಸಂಭ್ರಮಾಚರಣೆ ನಡೆಯುವ ಸ್ಥಳಗಳಲ್ಲಿ 250 ಕಡೆ ತಾತ್ಕಲಿಕವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸೇಫ್ಟಿ ಶೆಲ್ಟರ್ಗಳು, ಆಂಬುಲೆನ್ಸ್ಗಳನ್ನು ನಿಯೋಜಿಸಲಾಗುತ್ತಿದೆ. ಜನದಟ್ಟಣೆಯ ಮೇಲೆ ಡ್ರೋನ್ ಕ್ಯಾಮೆರಾಗಳಿಂದ ಪೊಲೀಸರು ನಿಗಾವಹಿಸಲಿದ್ದಾರೆ ಎಂದು ತಿಳಿಸಿದರು.
ಮಹಿಳಾ ಸುರಕ್ಷತೆ ಮತ್ತು ಜನಸಂದಣಿ ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸಲಾಗುವುದು. ಈಗಾಗಲೇ ಬಾರ್, ರೆಸ್ಟೋರೆಂಟ್, ಮಾಲ್ಗಳ ಮಾಲೀಕರುಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಡಿಜಿಪಿ ಅವರು 15 ಅಂಶಗಳ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ ಎಂದರು.
ಟೆರರಿಸ್ಟ್ ದೃಷ್ಟಿಯಿಂದಲೂ ಹೆಚ್ಚಿನ ಭದ್ರೆತೆಗೆ ಒತ್ತು ನೀಡಲಾಗಿದೆ. ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಈಗಾಗಲೇ ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸಿ, ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಗಮನ ಹರಿಸಲಾಗಿದೆ.
ಮುಖಚರ್ಯೆ ಗುರುತಿಸುವ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಅಪರಾಧ ಚಟುವಟಿಕೆ ಹಿನ್ನೆಲೆಯುಳ್ಳವರ ಮಾಹಿತಿ ಫೇಸ್ ರೆಕಾಗ್ನೈಸೇಷನ್ ಎಐ ಕ್ಯಾಮೆರಾದಿಂದ ಗೊತ್ತಾಗಲಿದೆ. ಅಂಥವರು ಕಂಡು ಬಂದರೆ ಕೂಡಲೇ ಎಚ್ಚರಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಅನುಕೂಲವಾಗುತ್ತದೆ.
ಕಳೆದ ಐದು ದಿನದಿಂದ ನಗರದಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದವರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ. 2854 ಸವಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದರು.

