
ಚಿಕ್ಕನಾಯಕನಹಳ್ಳಿ: “ಮನುಷ್ಯ ನೆಮ್ಮದಿಯಿಂದ ಬದುಕಿ ಬಾಳಲು ಧರ್ಮದ ಆಚರಣೆ ಅತ್ಯಗತ್ಯ. ನಾವು ಧರ್ಮವನ್ನು ರಕ್ಷಿಸಿದರೆ, ಆ ಧರ್ಮವು ನಮ್ಮನ್ನು ಸಂಕಷ್ಟದ ಸಮಯದಲ್ಲಿ ರಕ್ಷಿಸುತ್ತದೆ,” ಎಂದು ಮಾದಿಹಳ್ಳಿ ಹಿರೇಮಠದ ಶ್ರೀ ಷ.ಬ್ರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ತಾಲ್ಲೂಕಿನ ಸೊರಲಮಾವು ಗ್ರಾಮದ ಶ್ರೀ ಈಶ್ವರ ದೇವಸ್ಥಾನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಸಹಸ್ರ ಬಿಲ್ವಾರ್ಚನೆ ಪೂಜೆ’ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ಮನುಷ್ಯನ ಸಂಬಂಧಗಳು ಕ್ಷೀಣಿಸುತ್ತಿವೆ. ಇಂತಹ ಸಂದರ್ಭದಲ್ಲಿ ಧರ್ಮವಂತರಾಗಿ ಬಾಳಲು ಧರ್ಮಸ್ಥಳದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸ್ವಸಹಾಯ ಸಂಘಗಳ ಮೂಲಕ ಜನರನ್ನು ಒಗ್ಗೂಡಿಸುತ್ತಿದ್ದಾರೆ. ತಂದೆ-ತಾಯಿಗೆ ಒಳ್ಳೆಯ ಮಕ್ಕಳಾಗಿ ಬದುಕುವುದನ್ನು ಈ ಸಂಸ್ಥೆ ಕಲಿಸುತ್ತಿದೆ. ಧರ್ಮಸ್ಥಳದ ಯೋಜನೆ ಇಡೀ ದೇಶಕ್ಕೇ ಮಾದರಿ ಎಂದು ಶ್ರೀಗಳು ಶ್ಲಾಘಿಸಿದರು.
ಗ್ರಾಮ ಪಂಚಾಯತ್ ಸದಸ್ಯ ಸಿದ್ದಲಿಂಗ ಸ್ವಾಮಿ ಮಾತನಾಡಿ, “ಪೂಜ್ಯ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಮಟ್ಟದ ಮಹಿಳೆಯರಿಗೆ ಸ್ವ-ಉದ್ಯೋಗ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಆರ್ಥಿಕ ಶಿಸ್ತು ಹಾಗೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಇದು ನೇರವಾಗಿದೆ,” ಎಂದರು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಚಂದ್ರಮ್ಮ ವಹಿಸಿದ್ದರು. ತಾಲ್ಲೂಕು ಯೋಜನಾಧಿಕಾರಿ ಪ್ರೇಮಾನಂದ ಎಲ್.ಬಿ., ಗ್ರಾ.ಪಂ. ಸದಸ್ಯರಾದ ಮಂಜುನಾಥ್, ಪವಿತ್ರ, ಶಾರದಮ್ಮ ಹಾಗೂ ಹಾಲಿನ ಡೈರಿ ಅಧ್ಯಕ್ಷ ವಸಂತ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಊರಿನ ಗಣ್ಯರಾದ ಕರಿಯಪ್ಪ ಸ್ವಾಮಿ, ರಂಗಸ್ವಾಮಿ, ತಿಮ್ಮಯ್ಯ, ಮೂರ್ತಣ್ಣ, ಒಕ್ಕೂಟದ ಅಧ್ಯಕ್ಷರಾದ ದೇವರಾಜು, ಕವಿತಾ, ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಕುಮಾರ್, ಸೇವಾಪ್ರತಿನಿಧಿಗಳಾದ ಮಂಜುಳಾ, ರೇಖಾ, ಜಂಶಿದ್, ಕಾಂತಾಮಣಿ, ಧರಣೇಶ್, ರೇವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕೃಷಿ ಮೇಲ್ವಿಚಾರಕ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು, ಕಾಂತಾಮಣಿ ಸ್ವಾಗತಿಸಿದರು. ವಲಯದ ಮೇಲ್ವಿಚಾರಕ ವಸಂತ್ ಎಲ್. ವರದಿ ಮಂಡಿಸಿ, ವಂದಿಸಿದರು.
