ವರದಿ ಗುಬ್ಬಿ ಭರತ್

ಗುಬ್ಬಿ: ಹಾಗಲವಾಡಿ ಕೆರೆಗೆ ಹೇಮಾವತಿ ನೀರು ಹರಿಸುವ ಯೋಜನೆ ಬಹುತೇಕ ಪೂರ್ಣಗೊಂಡಿದೆ. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಓರ್ವ ರೈತನ ಮನವೊಲಿಸುವ ಪ್ರಯತ್ನ ನಡೆದಿದೆ. ಶೀಘ್ರದಲ್ಲಿ ಪರಿಹಾರ ನೀಡಿ ಎಲ್ಲವನ್ನೂ ಸುಖಾಂತ್ಯಗೊಳಿಸಿ ಹೊಸ ವರ್ಷದಲ್ಲೇ ಜೂನ್ ತಿಂಗಳಲ್ಲಿ ಹೇಮಾವತಿ ಹರಿಸುವ ಹಾಗಲವಾಡಿ ಹಾಗೂ ಬಿಕ್ಕೇಗುಡ್ಡ ಯೋಜನೆ ಪೂರ್ಣವಾಗಿ ನೀರು ಹರಿಸಲಾಗುವುದು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಭರವಸೆ ನೀಡಿದರು.
ತಾಲ್ಲೂಕಿನ ಕಾಟನಹಳ್ಳಿ ಕಾಲೋನಿಯ 30 ಲಕ್ಷದ ರೂಗಳ ಸಿಸಿ ರಸ್ತೆ, ಪುರ ಲಂಬಾಣಿ ತಾಂಡದ 45 ಲಕ್ಷ ರೂಗಳ ಸಿಸಿ ರಸ್ತೆ ಹಾಗೂ ಗುಡ್ಡೇನಹಳ್ಳಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಚೇಳೂರು ಹಾಗೂ ಹಾಗಲವಾಡಿ ಹೋಬಳಿಗಳ ರಸ್ತೆಗಳ ಅಭಿವೃದ್ಧಿಗೆ ನೂರು ಕೋಟಿ ಮಂಜೂರಾಗಿ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದರು.
ಗ್ರಾಮೀಣ ಭಾಗದ ರಸ್ತೆ ಹಾಗೂ ಗ್ರಾಮದ ಸಿಸಿ ರಸ್ತೆ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿ ಕಾಮಗಾರಿ ನಡೆದಿದೆ. ಈ ಜೊತೆಗೆ ಅತ್ಯವಶ್ಯ ಸೇತುವೆಗಳು ನಿರ್ಮಾಣ ಆಗಲಿದೆ. ತೊರೇಹಳ್ಳಿ ಓವರ್ ಬ್ರಿಡ್ಜ್ ನಿರ್ಮಿಸಲು ಈಗಾಗಲೇ 4.45 ಕೋಟಿ ಮಂಜೂರಾತಿ ಸಿಕ್ಕಿದೆ ಎಂದ ಅವರು ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿದೆ. ಸಾಧ್ಯವಾದಷ್ಟು ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಬಿಇಓ, ಡಿಡಿಪಿಐ ಜೊತೆ ಚರ್ಚಿಸಿ ಸ್ಥಳ ಪರಿಶೀಲನೆ ಮಾಡುವಂತೆ ಸೂಚಿಸಲಾಗಿದೆ ಎಂದರು.
ಕಂದಾಯ ಗ್ರಾಮ ಘೋಷಣೆಗೆ ಯಾರು ಬರಲಿ ಬಿಡಲಿ ನಾನೇ ಖುದ್ದು ಹುಡುಕಿ ಮಜರೆ ಗ್ರಾಮವನ್ನು ಕಂದಾಯ ಗ್ರಾಮವಾಗಿ ಮಾರ್ಪಾಡು ಮಾಡುತ್ತಿದ್ದೇನೆ. ಆದರೂ ಕೆಲ ಗ್ರಾಮಗಳು ಅಂದರೆ ಹತ್ತು ಹದಿನೈದು ತೋಟದ ಮನೆಗಳ ಗ್ರಾಮ ಕಂದಾಯ ಗ್ರಾಮ ಮಾಡಲು ಅಲ್ಲಿನ ಎಲ್ಲಾ ಜಮೀನು ಗ್ರಾಮ ಠಾಣ ಮಾಡಬೇಕಿದೆ. ಈ ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ ಎಂದ ಅವರು ಬಳ್ಳಾರಿ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ದೊಡ್ಡವರು ಅಧಿಕಾರ ಹಣ ಇರುವವರು ಅವರ ಬಗ್ಗೆ ಚರ್ಚೆ ಬೇಡ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಸದಸ್ಯರಾದ ಬಸವರಾಜು, ರಾಘವೇಂದ್ರ, ಮುಖಂಡರಾದ ಗಿರಿಯಣ್ಣ ಬೋವಿ, ಮಹದೇವಯ್ಯ, ಈಶಣ್ಣ, ರಮೇಶ್, ಸಣ್ಣರಂಗಯ್ಯ,ಗುತ್ತಿಗೆದಾರ ಬಸವರಾಜು ನಾಯಕ್, ಕಾರ್ಯದರ್ಶಿ ಸಿದ್ದಯ್ಯ ಇತರರು ಇದ್ದರು.

