ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ನಿರಶನಗೊಳಿಸುವ ಹುನ್ನಾರ ನಡೆಸಿದೆ; ಶಾಸಕ ಟಿ.ಬಿ.ಜಯಚಂದ್ರ

Surya Pragathi Editor
2 Min Read

ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ನಿರಶನಗೊಳಿಸುವ ಹುನ್ನಾರ ನಡೆಸಿದೆ; ಶಾಸಕ ಟಿ.ಬಿ.ಜಯಚಂದ್ರ

ಶಿರಾ : ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯು ಒಂದು ಅಂತರಾಷ್ಟ್ರೀಯ ಮಟ್ಟದ ಯೋಜನೆಯಾಗಿದ್ದು, ಇದು ಗ್ರಾಮೀಣ ಜನತೆಗೆ ಸೇವಾ ಭದ್ರತೆಯ ಯೋಜನೆಯನ್ನು ಒದಗಿಸಿತ್ತು. ಇದರಿಂದ ಗ್ರಾಮೀಣ ಜನರು ವರ್ಷಕ್ಕೆ 37 ಸಾವಿರ ರೂಗಳ ಹಣವನ್ನು ದುಡಿಯಬಹುದಿತ್ತು. ಇಂತಹ ಯೋಜನೆಯನ್ನು ಕೇಂದ್ರ ಸರ್ಕಾರ ನಿರಶನಗೊಳಿಸಿ ಬೇರೆ ಕಾನೂನು ತರುವ ಹುನ್ನಾರ ನಡೆಸಿದ್ದಾರೆ. ಈ ಬಗ್ಗೆ ಇಂದಿನ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದು ರಾಜ್ಯ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ ತಾಲೂಕಿನ ಸೀಬಿ ಅಗ್ರಹಾರ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ದೇಶದಲ್ಲಿ ಕಳೆದ 20 ವರ್ಷಗಳ ಹಿಂದೆ ಯುಪಿಎ ಸರಕಾರದಲ್ಲಿ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಈಗಿನ ಎನ್‌ಡಿಎ ಸರಕಾರ ಮೊಟುಕುಗೊಳಿಸುವ ಹುನ್ನಾರ ನಡೆಸುತ್ತಿದ್ದು, ರಾಜ್ಯ ಕಾಂಗ್ರೆಸ್ ಸರಕಾರ ಇದಕ್ಕೆ ಅವಕಾಶ ನೀಡುವುದಿಲ್ಲ. ನಾವು ಎಂದಿಗೂ ಗ್ರಾಮಗಳ ಅಭಿವೃದ್ಧಿ ಪರ, ರೈತರ ಪರವಾಗಿದ್ದೇವೆ ಎಂದರು.

 


16 ನೂತನ ಗ್ರಾ.ಪಂ. ಕಟ್ಟಡ ನಿರ್ಮಾಣ: ಶಿರಾ ಕ್ಷೇತ್ರದಲ್ಲಿ ಕಳೆದ ಒಂದುವರೆ ವರ್ಷದಲ್ಲಿ 36 ಪಂಚಾಯಿತಿಗಳಲ್ಲಿ 12 ಪಂಚಾಯಿತಿಗೆ ನೂತನ ಕಟ್ಟಡಗಳನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಇಂತಹ ನೂತನ ಕಟ್ಟಡಗಳನ್ನು ಆಡಳಿತ ಚುರುಕಾಗಿರುವ ಹಿನ್ನೆಲೆಯಲ್ಲಿ ನಿರ್ಮಿಸಲು ಸಾಧ್ಯವಾಗಿದೆ. ನೂತನ ಕಟ್ಟಡದಲ್ಲಿ ಸಂವಿಧಾನಬದ್ಧವಾದ ರೀತಿಯಲ್ಲಿ ಚರ್ಚೆ ಮಾಡಬೇಕು. ಸಮಸ್ಯೆಗಳನ್ನು ಬಗೆಹರಿಸಲು ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.
ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್.ಗೌಡ ಮಾತನಾಡಿ ಶಿರಾ ತಾಲೂಕಿನಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡಗಳು ಹೆಚ್ಚಿನ ರೀತಿಯಲ್ಲಿ ನಿರ್ಮಾಣ ಆಗುತ್ತಿರುವುದು ಶ್ಲಾಘನೀಯ. ಗ್ರಾಮ ಪಂಚಾಯಿತಿಗಳು ಜನರ ಸಮಸ್ಯೆ ಆಲಿಸಲು ವ್ಯವಸ್ಥಿತಿ ಕಟ್ಟಡ ಮುಖ್ಯ. ಇದಕ್ಕೆ ಅಧಿಕಾರಿಗಳ ಇಚ್ಚಾಶಕ್ತಿ ಕಾರಣ. ತಾಲೂಕಿನಲ್ಲಿ ಉತ್ತಮ ಕಟ್ಟಡಗಳು ನಿರ್ಮಾಣವಾಗಿ ತಾಲೂಕಿಗೆ ಶೋಭೆ ತರುತ್ತಿದೆ ಎಂದರು.
ಮಾಜಿ ಜಿ.ಪಂ. ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ ಮಾತನಾಡಿ ಉತ್ತಮ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಲು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಕ್ಷಾತೀತವಾಗಿ ಎಲ್ಲರ ಸಹಕಾರ ಪಡೆದಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸೀಬಿ ಅಗ್ರಹಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಎಲ್. ಗಂಗಣ್ಣ ಲಕ್ಕಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಕೆ.ಗೀತಾ ಗೋವಿಂದರಾಜು, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗುಳಿಗೆನಹಳ್ಳಿ ನಾಗರಾಜು, ತಾಲೂಕು ಪಂಚಾಯತಿ ಕಾರ್ಯನಿರ್ವಾಣಾಧಿಕಾರಿ ಆರ್.ಹರೀಶ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ (ಪ್ರಭಾರ) ಆರ್.ರಂಗನಾಥ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪರ್ವತಪ್ಪ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ನಾಗರಾಜು, ಪಿಡಿಓ ಸಂಘದ ಅಧ್ಯಕ್ಷ ವೆಂಕಟೇಶಮೂರ್ತಿ, ಪಿಡಿಓ ಲೋಕೇಶ್, ಕೆಎಂಎಫ್ ಮಾಜಿ ನಿರ್ದೇಶಕ ಬಾಲೇನಹಳ್ಳಿ ಪ್ರಕಾಶ್, ಸದಸ್ಯರಾದ ಕೆಂಪಯ್ಯ, ಕಮಲ, ಚಿದಾನಂದ, ಚಿಕ್ಕರಂಗಪ್ಪ, ಜಿ. ಮಮತಾ, ಎಲ್. ಎನ್. ಮಹದೇವಯ್ಯ, ಕೆ.ಎಸ್. ರವೀಶ್, ಗಂಗಮ್ಮ, ಮುಖಂಡರಾದ ಹುಂಜಿನಾಳ ರಾಜಣ್ಣ, ತಾಳಗುಂದ ನವೀನ್ ಕುಮಾರ್, ಎಇಇ ರಾಜಣ್ಣ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

Share this Article
Leave a comment