ರಾಮನಗರ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ

ರಾಮನಗರ: ನ್ಯಾಯಾಲಯ ಸಮುಚ್ಚಯಕ್ಕೆ ಅನಾಮಧೇಯ ವ್ಯಕ್ತಿ ಇ-ಮೇಲ್ ಮೂಲಕ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದು, ನ್ಯಾಯಾಧೀಶರು ಸೂಚನೆ ಮೇರೆಗೆ ಪೊಲೀಸರು ತಕ್ಷಣ ಎಚ್ಚೆತ್ತುಕೊಂಡು ವಕೀಲರು, ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಹೊರಗೆ ಕಳುಹಿಸಿದ ಘಟನೆ ಸೋಮವಾರ ಜರುಗಿದೆ.

ಸೋಮವಾರ ಬೆಳಿಗ್ಗೆ ಅಪರಿಚಿತ ವ್ಯಕ್ತಿಯಿಂದ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಈ ಬಗ್ಗೆ ಜಿಲ್ಲಾ ಸತ್ರ ನ್ಯಾಯಾಧೀಶರು, ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎಚ್.ಅಣ್ಣಯ್ಯನವರ ಅವರು ಅನಾಮಿಕ ವ್ಯಕ್ತಿಯ ಸಂದೇಶದ ವಿವರಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿ ಮಾತನಾಡಿದರು.
ಜಿಲ್ಲಾ ಸತ್ರ ನ್ಯಾಯಾಧೀಶರ ಕೊಠಡಿಯಲ್ಲಿ 12 ಆರ್‌ಡಿಎಕ್ಸ್ ಇಡಿಗಳನ್ನು ಇರಿಸಲಾಗಿದ್ದು ಶೀಘ್ರದಲ್ಲೇ ಅದು ಸ್ಫೋಟಗೊಳ್ಳಲಿದೆ ಎಂಬ ಇ-ಮೇಲ್ ಮಾಹಿತಿ ಬಂದ ಕೂಡಲೇ ನ್ಯಾಯಾಲಯದೊಳಗೆ ಮತ್ತು ಹೊರಗಡೆ ಇದ್ದ ಜನಸಂದಣಿಯನ್ನು ಹೊರಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.
ತಮಿಳುನಾಡಿನಲ್ಲಿ ಇಡಬ್ಲ್ಯೂಎಸ್ ಮೀಸಲಾತಿ ಕಾನೂನು ಜಾರಿ ವಿರೋಧಿಸಿ ಕರ್ನಾಟಕ ರಾಜ್ಯ ಮಂಡ್ಯ, ಮಡಿಕೇರಿ, ರಾಮನಗರ, ದಾವಣಗೆರೆಯ ನ್ಯಾಯಾಲಯಗಳಿಗೆ ಬಾಂಬ್ ಇಡಲಾಗಿದೆ ಎಂಬ ಮಾಹಿತಿ ಬಂದಿರುವುದರಿಂದ ಇಂದು ಮಧ್ಯಾಹ್ನ ೧೨.೧೫ ಗಂಟೆಯೊಳಗೆ ಎಲ್ಲರನ್ನು ಹೊರಕ್ಕೆ ಕಳುಹಿಸಿ ಎಂಬ ಮಾಹಿತಿ ಸಿಕ್ಕ ಕೂಡಲೇ ನ್ಯಾಯಾಲಯದೊಳಗೆ ಇರುವ ನ್ಯಾಯಾಧೀಶರುಗಳಾದ ನಾವು ಸೇರಿದಂತೆ ವಕೀಲರು, ಕಕ್ಷೀದಾರರು ಹಾಗೂ ಸಾರ್ವಜನಿಕರು ಹೊರಗೆ ಬಂದಿದ್ದೇವೆ ಎಂದರು.
ಬಾಂಬ್ ಬೆದರಿಕೆ ಬಗ್ಗೆ ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವು. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಸ್ವಲ್ಪ ಸಮಯದಲ್ಲಿ ಮಂಡ್ಯದಿಂದ ಶ್ವಾನದಳ ಹಾಗೂ ವಿಶೇಷ ಪೊಲೀಸ್ ಪಡೆ ಬಾಂಬ್ ಪತ್ತೆ ಕಾರ್ಯ ಕೈಗೊಳ್ಳಲಿದೆ. ಎರಡೂವರೆ ತಾಸಿನೊಳಗೆ ಬಾಂಬ್ ಪತ್ತೆ ಕಾರ್ಯ ಪೂರ್ಣಗೊಳ್ಳಲಿದ್ದು, ಸಾರ್ವಜನಿಕರು ಸಂಯಮದಿಂದ ಇರಬೇಕೆಂಬ ಮನವಿಯನ್ನು ಪೊಲೀಸರು ಮಾಡಿದ್ದಾರೆ ಎಂದರು.

ಬಳಿಕ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಸಮಯ ಶೋಧಕಾರ್ಯ ನಡೆಯಿತು. ಅಂತಿಮವಾಗಿ ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಹುಸಿ ಬಾಂಬ್ ಸಂದೇಶದಿಂದ ನ್ಯಾಯಾಲಯದ ದಿನಪೂರ್ತಿ ಕಲಾಪಗಳು ಮುಂದೂಡಲ್ಪಟ್ಟಿತು. ಸಂದೇಶ ಕಳುಹಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹಾಗೂ ವಕೀಲರ ಸಂಘ ಆಗ್ರಹಿಸಿದೆ.

