
ಶಿರಾ : ಗುರು ಕಲಿಸಿದ ವಿದ್ಯೆ , ಸಹನೆ,ವಿನಯ, ಗುಣಮಟ್ಟದ ಶಿಕ್ಷಣ ಹಾಗೂ ಸಮಾಜದಲ್ಲಿ ಎಲ್ಲರನ್ನು ಸಮಾನರಂತೆ ಕಾಣುತ್ತ ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರ ಹೀಗೆ ಎಲ್ಲವನ್ನು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಕಲಿಸಿದ ಕಾರಣ, ವಿದ್ಯೆ ಕಲಿಸಿದ ಗುರುವನ್ನು ಗೌರವಿಸ ಬೇಕೆಂಬ ದೃಢಸಂಕಲ್ಪ ಹಳೆಯ ವಿದ್ಯಾರ್ಥಿಗಳಲ್ಲಿ ಮೂಡಿರುವುದು ನಾನು ಶಿಕ್ಷಕನಾಗಿದ್ದಕ್ಕೂ ಸಾರ್ಥಕವಾಯಿತು ಎಂಬ ಮನೋಭಾವ ನನ್ನಲ್ಲಿ ಮೂಡಿಸಿದೆ ಎಂದು ಶಿಕ್ಷಕ ಎಲ್. ನರಸಿಂಹರಾಜು ಹೇಳಿದರು.
ಶಿರಾ ತಾಲೂಕಿನ ಹನುಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾನುವಾರ ಆಯೋಜಿಸಿದ್ದ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಹಾಗೂ ನಿವೃತ್ತ ಶಿಕ್ಷಕರಿಗೆ ಗುರು ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಐಎಎಸ್,ಐಪಿಎಸ್, ಕೆಎಎಸ್ ನಂತಹ ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ, ಇದಕ್ಕೆ ಸರ್ಕಾರಿ ಶಾಲೆಗಳ ಶಿಕ್ಷಕರ ಬದ್ಧತೆ, ವಿದ್ಯಾರ್ಥಿಗಳಿಗೆ ಪರಿಪೂರ್ಣ ಶಿಕ್ಷಣ ನೀಡಬೇಕೆಂಬ ಹಂಬಲವೇ ಕಾರಣ, ಹನುಮನಹಳ್ಳಿ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳು ನೀಡಿದ ಈ ಹೃದಯಸ್ಪರ್ಶಿ ಬೀಳ್ಕೊಡುಗೆ ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಸುಂದರ ಕ್ಷಣ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತರಾಜು ಮಾತನಾಡಿ ಹನುಮನಹಳ್ಳಿ ಗ್ರಾಮದ ಹಳೆಯ ವಿದ್ಯಾರ್ಥಿಗಳು ವಿದ್ಯೆ ಕಲಿಸಿದ ಗುರುಗಳಿಗೆ ವಿಶಿಷ್ಟ ವೈಭವಯುತ ಬೀಳ್ಕೊಡುಗೆ ಹಾಗು ಗುರುವಂದನೆ ನೆರವೇರಿಸುತ್ತಿರುವುದು, ಗ್ರಾಮೀಣ ಪ್ರದೇಶದ ಜನರ ಪ್ರೀತಿ ವಿಶ್ವಾಸದ ಶ್ರೀಮಂತಿಕೆಯನ್ನು ಸಾಕ್ಷಿಕರಿಸುತ್ತದೆ.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಗೂ ದೊರಕುತ್ತಿದ್ದು, ಪೋಷಕರೆಲ್ಲರೂ ಕೂಡ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸುವಂತಹ ಹವ್ಯಾಸವನ್ನು ರೂಡಿಸಿಕೊಂಡು ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದರು.
ನಿವೃತ್ತ ಶಿಕ್ಷಕರಾದ ಶಿವರುದ್ರಪ್ಪ , ಟಿ.ಆರ್. ಮಂಜುನಾಥ್, ಜಿ. ಶಿವಶಂಕರಯ್ಯ, ಮಾರಣ್ಣ, ರಮೇಶ್, ಶ್ರೀನಿವಾಸ್, ಮೇಲ್ಕುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮಣ್, ಸದಸ್ಯೆ ಜ್ಯೋತಿ ನರಸಿಂಹಮೂರ್ತಿ, ಮಾಜಿ ಸದಸ್ಯ ಸುರೇಶ್ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ದೇವರಾಜು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ಮುಖಂಡ ಜೋಡಿ ಬ್ರದರ್ಸ್ ಕೃಷ್ಣಮೂರ್ತಿ, ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾದ ಹೆಚ್. ಜಿ. ಮಂಜುನಾಥ್, ರಮೇಶ್, ಮುಖ್ಯ ಶಿಕ್ಷಕರ ರಾಮ ಹನುಮಯ್ಯ, ಶಿಕ್ಷಕ ಎಂ. ಆರ್. ಶ್ರೀ ರಂಗ, ಗಿರೀಶ್, ನಾರಾಯಣಪ್ಪ, ತಿಪ್ಪೇಸ್ವಾಮಿ ಸೇರಿದಂತೆ ಹಲವಾರು ಶಿಕ್ಷಕರು , ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
